ಕುಮ್ರಹಾರ

ಪಾಟಲೀಪುತ್ರದ (ಈಗಿನ ಪಾಟ್ಣ) ಒಂದು ಉಪನಗರ. ಪಾಟಲೀಪುತ್ರ ಕ್ರಿ. ಪೂ. 5ನೆಯ ಶತಮಾನದಿಂದ ಕ್ರಿ.ಶ. 600ರ ವರೆಗೆ ಒಳ್ಳೆಯ ಬಂದರಾಗಿ, ವ್ಯಾಪಾರ ಕೇಂದ್ರವಾಗಿ, ಸೈನ್ಯದ ಆಯಕಟ್ಟಿನ ಸ್ಥಳವಾಗಿ, ಭದ್ರ ಕೋಟೆಯುಳ್ಳ ಪಟ್ಟಣವಾಗಿ ಮೆರೆಯಿತು-ಎಂಬ ವಿಷಯ ಕುಮ್ರಹಾರದಲ್ಲಿ ಡಿ. ಬಿ. ಸ್ಪೂನರ್ 1912-19ರಲ್ಲೂ ಮತ್ತು ಎ.ಎಸ್. ಅಳ್ತೇಕರ ಮತ್ತು ವಿ. ಮಿಶ್ರರು 1951-55ರಲ್ಲೂ ನಡೆಸಿದ ಉತ್ಖನನಗಳಿಂದ ತಿಳಿದುಬರುತ್ತದೆ.

ಕುಮ್ರಹಾರದ ದಕ್ಷಿಣಕ್ಕೆ ಸೋಣ ನದಿಯ ಹಳೆಯ ಪಾತ್ರವಿದೆ. ಗಂಗಾ ನದಿ ಇದರ ಈಶಾನ್ಯಕ್ಕೆ ಹರಿಯುತ್ತದೆ. ಕುಮಾರ ಮಹೇಂದ್ರನ ಸಲುವಾಗಿ ಈ ಪ್ರದೇಶದಲ್ಲಿ ಅಶೋಕ ಮೌರ್ಯ ಒಂದು ವಿಹಾರವನ್ನು ಕಟ್ಟಿಸಿದ್ದಿರಬಹುದೆಂದೂ ಕುಮಾರ ವಿಹಾರವೇ ಕುಮ್ರಹಾರವಾಗಿರಬಹುದೆಂದೂ ಹೇಳುತ್ತಾರೆ. 

ಡಿ. ಬಿ. ಸ್ಪೂನರ್ ಕುಮ್ರಹಾರದಲ್ಲಿ ಉತ್ಖನನ ನಡೆಸಿದಾಗ ಅಲ್ಲಿ 72 ಅಖಂಡ ಕಲ್ಲಿನ ಕಂಬಗಳ ಅದ್ಭುತ ಸಭಾಂಗಣವೊಂದು ಪತ್ತೆಯಾಯಿತು. ಮುಂದೆ ಅಳ್ತೇಕರ ಮತ್ತು ಮಿಶ್ರರು ಇನ್ನೂ 8 ಕಂಬಗಳನ್ನು ಪತ್ತೆಹಚ್ಚಿದರು. ಈ ಮಂಟಪಕ್ಕೆ 80 ಕಂಬಗಳಿದ್ದುವೆಂದೂ ಇದಕ್ಕೆ ದಕ್ಷಿಣ ದಿಕ್ಕಿನಲ್ಲಿ ಪ್ರವೇಶಿಸಲು ನಾಲ್ಕು ಕಂಬಗಳ ಒಂದು ಮುಖಮಂಟಪ ಇತ್ತೆಂದೂ ಅವರು ಸಿದ್ಧಪಡಿಸಿದರು. 

ಇಟ್ಟಿಗೆಯಲ್ಲಿ ಕಟ್ಟಿದ ಬೌದ್ಧವಿಹಾರಗಳು ಮತ್ತು ಚೈತ್ಯಗಳು ಇಲ್ಲಿ ಕಂಡು ಬಂದಿವೆ.

ಇವಲ್ಲದೆ ಬೂದು ಬಣ್ಣದ ಮಣ್ಣಿನ ಪಾತ್ರೆಗಳು, ಉತ್ತರ ಭಾರತದ ಕಪ್ಪು ಹೊಳಪಿನಿಂದ ಕೂಡಿದ ಪಾತ್ರೆಗಳು. ಕುಷಾಣರ ಮತ್ತು ಗುಪ್ತರ ನಾಣ್ಯಗಳು, ಸಂಗರ, ಕುಷಾಣರ ಮತ್ತು ಗುಪ್ತರ ಕಾಲದ ಸುಟ್ಟಮಣ್ಣಿನ ಮುದ್ರೆ ಮುದ್ರಿಕೆಗಳು ಮತ್ತು ಕುಷಾಣಪೂರ್ವ ಕಾಲದ ಅಕ್ಷರಗಳನ್ನು ಕೊರೆದ ಮಡಕೆಯ ಚೂರುಗಳು ದೊರೆತಿವೆ. 

ಹೀಗೆ ದೊರೆತ ವಸ್ತುಗಳಲ್ಲಿ ಗುಪ್ತರ ಕಾಲದ ಒಂದು ಮುದ್ರೆಯ ಮೇಲೆ `ಶ್ರೀ ಆರೋಗ್ಯ ವಿಹಾರೇ ಭಿಕ್ಷು ಸಂಘಸ್ಯ' ಎಂಬ ಶಾಸನವಿದೆ. ಇದೇ ರೀತಿ ಇತರ ಶಾಸನಗಳುಳ್ಳ ಮುದ್ರೆಗಳೂ ಸಿಕ್ಕಿವೆ.

(ಎ.ಎಂ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ